Monday, December 23, 2024
Homeಶಿಕ್ಷಣಪದವಿ ನಂತರವೂ ಉತ್ತಮ ಭವಿಷ್ಯವಿದೆ

ಪದವಿ ನಂತರವೂ ಉತ್ತಮ ಭವಿಷ್ಯವಿದೆ

ನಗೇರಲ್ಲನಲ್ಲಿ ಶಾಸಕ ಜಿ.ಎಸ್. ಪಾಟೀಲ ಹೇಳಿಕೆ

ನೆಲದನುಡಿ ನ್ಯೂಸ್, ನರೇಗಲ್ಲ

ಬರೀ ತಾಂತ್ರಿಕ ಶಿಕ್ಷಣ ಮಾತ್ರ ಶಿಕ್ಷಣ, ಪದವಿ ಶಿಕ್ಷಣ ಏನೂ ಅಲ್ಲ ಎಂದು ನೀವೆಂದಿಗೂ ಭಾವಿಸಬೇಡಿ. ಪದವಿ ನಂತರವೂ ನಿಮಗೆ ಉತ್ತಮ ಅವಕಾಶ ಮತ್ತು ಭವಿಷ್ಯವಿದೆ ಎಂದು ರೋಣ ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿವಿಧ ಸಾಂಘಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎ. ಬಿ.ಎಸ್.ಸಿ. ಬಿ.ಕಾಮ್, ಬಿಬಿಎ, ಬಿಸಿಎ ಮುಂತಾದ ಪದವಿಗಳನ್ನು ಪಡೆದ ನಂತರ ನೀವುಗಳು ಇಚ್ಛಿಸಿದರೆ ಐಎಎಸ್, ಐಪಿಎಸ್, ಅಧಿಕಾರಿಗಳು ಹೀಗೆ ಏನಾದರೂ ಆಗು ಸಾಧ್ಯವಿದೆ. ಏನಾಗಬೇಕೆಂಬುದುನ್ನು ಮೊದಲು ನಿರ್ಧರಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ನೀವುಗಳು ಜೀವನದಲ್ಲಿ ಸಾಧನೆ ಮಾಡಬೇಕೆಂದು ಶಾಸಕ ಪಾಟೀಲ ಹೇಳಿದರು.

ಇಂದಿನ ಕಾರ್ಯಕ್ರಮವನ್ನು ಉದ್ಘಾಟಿಸುವಾಗ ನನಗೆ ನನ್ನ ಕಾಲೇಜಿನ ದಿನಗಳು ನೆನಪಾದವು. ಇವು ಬಂಗಾರದಂತ ದಿನಗಳು. ಇವುಗಳ ಅನುಭವವನ್ನು ನೀವುಗಳು ಸಮರ್ಪಕವಾಗಿ ಸವಿದು ಮುಂದೆ ನಿಮ್ಮ ಕುಟುಂಬಕ್ಕೆ ಆಧಾರವಾಗಿರಿ. ಗ್ರಾಮೀಣ ಭಾಗದ ಈ ಸರಕಾರಿ ಕಾಲೇಜು ಉತ್ತಮ ಶಿಕ್ಷಣ ನೀಡುತ್ತಿದೆ. ಶೈಕ್ಷಣಿಕ ರಂಗದಲ್ಲಿ ಈಗಾಗಲೆ ಹಲವಾರು ಸಾಧನೆಗಳನ್ನು ಮಾಡಿದೆ. ಇವುಗಳನ್ನೆಲ್ಲ ಕಂಡಾಗ ನನಗೆ ಅತೀವ ಆನಂದವಾಗಿದೆ. ಈ ಕಾಲೇಜಿನ ಕೀರ್ತಿ ಹೀಗೇ ಮುಂದುವರೆಯಲಿ ಎಂದು ಶಾಸಕ ಪಾಟೀಲ ಹಾರೈಸಿದರು.

ಈ ಮಹಾವಿದ್ಯಾಲಯಕ್ಕೆ ಬರಲು ಸೂಕ್ತವಾದ ರಸ್ತೆಯಿಲ್ಲ. ಅದರ ಬಗ್ಗೆ ಪ್ರಾಚಾರ್ಯರು ಬೇಡಿಕೆಯನ್ನಿರಿಸಿದ್ದಾರೆ. ಹಾಗೆಯೇ ಇಲ್ಲೊಂದು ಪಿಯು ವಸತಿ ನಿಲಯದ ಬೇಡಿಕೆಯನ್ನೂ ಇರಿಸಿದ್ದಾರೆ. ಇವುಗಳನ್ನು ಆದ್ಯತೆಯ ಮೇರೆಗೆ ಬೇಗನೆ ಪೂರೈಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು.

ಎಷ್ಟೋ ಜನ ಹೆಣ್ಣು ಮಕ್ಕಳು ಮನೆಯಲ್ಲಿನ ಆರ್ಥಿಕ ತೊಂದರೆಯಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಅಂಥವರ ತೊಂದರೆಯನ್ನು ಗಮನಿಸಿ ಪದವಿ ಶಿಕ್ಷಣದವರೆಗೆ ಯಾವ ಫೀ ಇಲ್ಲದಂತೆ, ಕಾಲೇಜಿಗೆ ಬರಲು ಬಸ್‌ನ ಅನುಕೂಲವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲವನ್ನೂ ಅನುಕೂಲ ಮಾಡಿಕೊಟ್ಟಿದೆ. ಇದರ ಪ್ರಯೋಜನವನ್ನು ನೀವುಗಳು ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸವನ್ನು ಪಡೆಯಬೇಕೆಂದು ಶಾಸಕ ಪಾಟೀಲ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.

ಸಭೆಯನ್ನುದ್ದೇಶಿಸಿ ಗದಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಫ್. ಸಿದ್ನೆಕೊಪ್ಪ ಮಾತನಾಡಿದರು. ವೇದಿಕೆಯ ಮೇಲೆ ಶಹರ ಘಟಕದ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಪ.ಪಂ. ಸದಸ್ಯ ಮುತ್ತಪ್ಪ ನೂಲ್ಕಿ, ಮುಖಂಡರಾದ ಅಲ್ಲಾಭಕ್ಷಿ ನದಾಫ್, ಶೇಕಪ್ಪ ಜುಟ್ಲ, ಶೇಕಪ್ಪ ಕೆಂಗಾರ, ವಿದ್ಯಾರ್ಥಿ ಪ್ರತಿನಿಧಿ ಕೆ.ವೈ. ಹೊನ್ನವಾಡ, ವಿದ್ಯಾರ್ಥಿನಿಯರ ಪ್ರತಿನಿಧಿ ಅಕ್ಷತಾ ನರೇಗಲ್ಲ ಇನ್ನೂ ಮುಂತಾದವರಿದ್ದರು.

ವಿದ್ಯಾರ್ಥಿ ಶರಣಪ್ಪ ಕಮಗೋಳಿ ಪ್ರಾರ್ಥಿಸಿದರು. ಉಪನ್ಯಾಸಕಿ ಜಯಶ್ರೀ ಮುತಗಾರ ಸ್ವಾಗತಿಸಿದರು. ಪ್ರಾಚಾರ್ಯ ಈ.ಆರ್. ಲಗಳೂರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಸ್.ಎಲ್. ಗುಳೇದಗುಡ್ಡ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಸಜೀಲ ನಿರೂಪಿಸಿದರು. ಉಪನ್ಯಾಸಕಿ ಸುನಂದಾ ಮುಂಜಿ ವಂದಿಸಿದರು.

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!