ನೆಲದನುಡಿ ನ್ಯೂಸ್, ನರೇಗಲ್ಲ
ಡಿ.27 ರಿಂದ 29ರ ವರೆಗೆ ಪಾಂಡಿಚೇರಿಯಲ್ಲಿ ಜರುಗಿದ 34ನೇ ರಾಷ್ಟ್ರೀಯ ಜೂನಿಯರ್ ಅಟ್ಯಾಪಟ್ಯಾ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡಕ್ಕೆ ಸ್ಥಳೀಯ ಚೈತನ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಐದುಜನ ಕ್ರೀಡಾಪಟುಗಳು ಆಯ್ಕೆಗೊಂಡು ಭಾಗವಹಿಸಿ ಬಾಲಕರ ಮತ್ತು ಬಾಲಕಿಯರ ವಿಭಾಗದ ತಂಡಗಳು ತೃತೀಯ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ಸು ಸಾಧಿಸಿವೆ.
ಸ್ಥಳೀಯ ಚೈತನ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಚೈತನ್ಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಐದು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಬಾಲಕರ ವಿಭಾಗದಲ್ಲಿ ಬಾಗಲಕೋಟೆಯ ಪ ಪೂ ಕಾಲೇಜಿನಲ್ಲಿ ಅದ್ಯಯನ ಮಾಡುತ್ತಿರುವ ಯಶವಂತ ಕುಂಬಾರ, ಬಾಲಕಿಯರ ವಿಭಾಗದಲ್ಲಿ ಸ್ಥಳೀಯ ಅನ್ನದಾನೇಶ್ವರ ಪ ಪೂ ಮಹಾವಿದ್ಯಾಲಯದ ತೇಜಶ್ವಿನಿ ಪಲ್ಲೇದ, ಮಂಜುಳಾ ನಿಟ್ಟಾಲಿ, ಜಕ್ಕಲಿಯ ಎಸ್ ಎ ಜೆ ಡಿ ಪ್ರೌಢಶಾಲೆಯ ಅನಿತಾ ಮಾದರ ಹಾಗೂ ಜ್ಯೋತಿ ಬೆಳವಟಗಿ ಆಯ್ಕೆಯಾಗಿದ್ದರು. ಈ ಕ್ರೀಡಾಪಟುಗಳನ್ನೊಳಗೊಂಡAತೆ ರಾಜ್ಯ ತಂಡದ ಎಲ್ಲ ಕ್ರೀಡಾಪಟುಗಳ ಏಕಾಗೃತ ಕ್ರೀಡೆಯಿಂದ ಕರ್ನಾಟಕ ತಂಡ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನಪಡೆದುಕೊಳ್ಳಲು ಯಶಸ್ವಿಯಾಯಿತು.
ಈ ಎಲ್ಲ ಕ್ರೀಡಾಪಟುಗಳಿಗೆ ಬೆಂಗಾವಲಾಗಿನಿಂತು ಮಾರ್ಗದರ್ಶನ ಮಾಡಿದ್ದ ಅಟ್ಯಾಪಟ್ಯಾ ಸಂಸ್ಥೆಯ ಪ್ರಭಾರಿ ಕಾರ್ಯದರ್ಶಿ ಎಲ್.ಸಿ. ಲಮಾನಿ, ರಾಷ್ಟ್ರೀಯ ತರಬೇತುದಾರ ಕೆ.ಟಿ. ನಡುಮನಿ, ಸ್ಥಳೀಯ ಸಂಪನ್ಮೂಲ ತರಬೇತುದಾರ ವಿ.ಎ. ಕುಂಬಾರ, ಹಿರಿಯ ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲ ಹಾಗೂ ಚೈತನ್ಯ ಕ್ರೀಡಾ ಸಂಸ್ಥೆಯ ಮುಖ್ಯ ತರಬೇತುದಾರ ಮಹಮ್ಮದರಫೀಕ ರೇವಡಿಗಾರ ಇವರೆಲ್ಲರ ಮಾರ್ಗದರ್ಶನದ ಮೇರೆಗೆ ಕ್ರೀಡಾಪಟುಗಳು ಅತ್ಯೂತ್ತಮ ಕ್ರೀಡಾಪ್ರದರ್ಶನ ತೋರಲು ಸಾದ್ಯವಾಯಿತು.
ರಾಷ್ಟ್ರಮಟ್ಟದಲ್ಲಿ ಅತ್ಯೂತ್ತಮ ಪ್ರದರ್ಶನ ತೋರಿದ ಕ್ರೀಡಾ ಪಟುಗಳಿಗೆ, ತರಬೇತಿ ನೀಡಿದ ತರಬೇತುದಾರರಿಗೆ ಹಾಗೂ ಪ್ರೋತ್ಸಾಹಿಸಿ ಶಾಲಾ ಮುಖ್ಯಸ್ಥರಿಗೆ ಚೈತನ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಎನ್.ಕೆ. ಬೇವಿನಕಟ್ಟಿ, ಕಾರ್ಯದರ್ಶಿ ಸಂತೋಷ ಯಳಮಲಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.